ಈಶಾನ
ರುದ್ರಮೂರ್ತಿಗಳಲ್ಲಿ ಒಬ್ಬ; ಐಶ್ವರ್ಯಶೀಲವುಳ್ಳವ; ರುದ್ರದೇವತಾತ್ಮಕವಾದ ಆದ್ರ್ರಾನಕ್ಷತ್ರ; ಸಂಖ್ಯೆ ಹನ್ನೊಂದು; ಸಾಧ್ಯೆ ಎಂಬುವಳ ಮಗ, ಒಬ್ಬ ದೇವತೆ-ಈ ಎಲ್ಲ ಅರ್ಥಗಳನ್ನೂ ಈಶಾನ ಶಬ್ದ ಬಳಕೆಯಲ್ಲಿದೆ.

ಎಲ್ಲ ಇಂದ್ರಿಯ ಗುಣಗಳಿಗೆ ಆವಾಸನೂ ಎಲ್ಲ ಇಂದ್ರಿಯಗಳಿಗೆ ಹೊರತಾದವನೂ ಸರ್ವ ಶರಣ್ಯನೂ ಸರ್ವಪ್ರಭುವೂ ಬೃಹತ್ತೂ ಆದವನೆ ಈಶಾನ ಎಂದು ಕೃಷ್ಣ ಯಜುರ್ವೇದದಲ್ಲಿದೆ.

ಹರ ಮೃಡ ಶರ್ವ ಶಿವ ಭವ ಮಹಾದೇವ ಉಗ್ರ ಭೀಮ ಪಶುಪತಿ ರುದ್ರ ಈಶಾನ-ಈ ಹನ್ನೊಂದು ರುದ್ರರುಗಳಲ್ಲಿ ಒಬ್ಬ. ಈತ ಹೊಗೆಬಣ್ಣದ (ಧೂಮ್ರ) ಜಟಾಧಾರಿ ಎಂದು ಮಾರ್ಕಂಡೇಯ ಪುರಾಣದಲ್ಲಿದೆ.

ಪೃಥಿವೀ ಜಲ ತೇಜಸ್ಸು ವಾಯು ಆಕಾಶ ಯಜಮಾನಚಂದ್ರ ಮತ್ತು ಸೂರ್ಯ-ಈ ಅಷ್ಟವಿಧ ಮೂರ್ತಿಗಳಾದ, ಶರ್ವ ಭವ ರುದ್ರ ಉಗ್ರ ಭೀಮ ಪಶುಪತಿ ಮಹಾದೇವ ಮತ್ತು ಈಶಾನ ಎಂಬ ಶರಭಸ್ವರೂಪಿ ಶಿವನ ಎಂಟು ಪಾದಗಳಲ್ಲಿ ಸೂರ್ಯಮೂರ್ತಿಯಾದವನೇ ಈಶಾನ ಎಂದು ಕಾಳಿಕಾಪುರಾಣದಲ್ಲಿದೆ.
ಅಷ್ಟದಿಕ್ಪಾಲಕರಲ್ಲಿ ಪೂರ್ವೋತ್ತರ (ಈಶಾನ್ಯ) ದಿಕ್ಕಿಗೆ ಅಧಿಪತಿ. ಪರಮೇಶ್ವರ ಸ್ವರೂಪನಾದ ಈತನ ಬಣ್ಣ ಬಿಳುಪು. ಸ್ಫಟಿಕದಂತೆ ಕಾಂತಿಯಿಂದ ಕೂಡಿ ವೃಷಭ ವಾಹನವಾಗಿ ವರದಾಭಯ ಹಸ್ತಗಳುಳ್ಳವನೂ ಶೂಲ, ಅಕ್ಷಸೂತ್ರಧಾರಿಯೂ ಆಗಿದ್ದಾನೆ. ಸದ್ಯೋಜಾತ ವಾಮದೇವ ಅಘೋರ ತತ್ಪರುಷ ಈಶಾನವೆಂಬ ಪಂಚಮೂರ್ತಿಗಳಲ್ಲಿ ಒಬ್ಬ.

	ಅಂಕುಶ ಪಾಶ ಟಂಕ ಕಪಾಲ ಡಕ್ಕ ಅಕ್ಷ ಶೂಲ ಇವನ್ನು ಕೈಯ್ಗಳಲ್ಲಿ ಧರಿಸಿರುವ ಬಿಳುಪು ವರ್ಣದ ಪಂಚಮುಖವುಳ್ಳ ರೂಪದಿಂದ ಕೂಡಿದ ಈಶಾನ ಧ್ಯಾನಯೋಗ್ಯ.
ಜೈನಸಂಪ್ರದಾಯದಂತೆ ಇರುವ ಸೌಧರ್ಮಾದಿ ಹದಿನಾರು ಸ್ವರ್ಗಗಳಲ್ಲಿ ಈಶಾನವೂ ಒಂದು. ಮೇರುತಲದಿಂದ ಒಂದೂವರೆ ಯೋಜನ ಅಂತರದಲ್ಲಿರುವ ಮೊದಲ ಪಟಲದ ಸೌಧರ್ಮೇಶಾನ ಕಲ್ಪಗಳಲ್ಲಿ ಕಲ್ಪ (ಸ್ವರ್ಗ) ಎರಡನೆಯದು. ಈ ಕಲ್ಪಕ್ಕೆ ಒಡೆಯನಾದ ಇಂದ್ರನೇ ಈಶಾನ. ಈತ ತೀರ್ಥಂಕರನಿಗೆ ಛತ್ರಿಯನ್ನು ಹಿಡಿಯುವ ಕಾಯಕದವ. ಇವನ ಎತ್ತರ ಏಳು ಮೊಳ. ಈತನ ಆಯುಸ್ಸಿನ ಪ್ರಮಾಣ ಇಪ್ಪತ್ತು ಲಕ್ಷ ಸಾಗರೋಪಮ ವರ್ಷಗಳು. ಈಶಾನ ಕಲ್ಪದಲ್ಲಿ ಪಂಚವಿಧ ವರ್ಣಗಳಿಂದ ಕೂಡಿದ ಇಪ್ಪತ್ತೆಂಟು ಲಕ್ಷ ವಿಮಾನಗಳಿವೆ.
 (ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ